ಗಾಳಿ 1

ಭೂ ಮೇಲ್ಮೈಗೆ ಸಾಪೇಕ್ಷವಾಗಿ ಚಲಿಸುವ ವಾಯು (ವಿಂಡ್). ಸಾಮಾನ್ಯವಾಗಿ ವಾಯುವಿನ (ಏರ್) ಕ್ಷಿತಿಜೀಯ ಚಲನೆಗೆ (ಊಧ್ರ್ವ ಚಲನೆಗಲ್ಲ) ಹಾಗೂ 1-3 ಮಿನಿಟುಗಳ ವರೆಗೆ ಆಯ್ದ ಅವಧಿಯಲ್ಲಿ ವಾಯುಚಲನೆಯ ಸರಾಸರಿಗೆ ಗಾಳಿ ಎನ್ನುತ್ತೇವೆ. ಆದ್ದರಿಂದ ಸೂಕ್ಷ್ಮಹವಾವೈಜ್ಞಾನಿಕ ಪರಿಚಲನೆಗಳೇ (ಮೈಕ್ರೊ ಮೀಟೀರಿಯಾಲಾಜಿಕಲ್ ಸಕ್ರ್ಯುಲೇಷನ್ಸ್) ಮುಂತಾದ ಸೂಕ್ಷ್ಮ ವಾಯುಚಾಲನೆಗಳು ನಮ್ಮ ಪರಿಗಣನೆಯಲ್ಲಿ ಬರುವುದಿಲ್ಲ. 1-3 ಮಿನಿಟ್ ಅಂತರದ ಆಯ್ಕೆ ನಮಗೆ ಎರಡು ರೀತಿಯಲ್ಲಿ ಸಮರ್ಪಕವಾಗಿದೆ: 1 ವಾಯುಮಂಡಲದ ಪರಿಚಲನೆಯ ಪ್ರರೂಪದಲ್ಲಿ (ಸಕ್ರ್ಯುಲೇಷನ್ ಪ್ಯಾಟರ್ನ್) ಗಂಟೆಯಿಂದ ಗಂಟೆಗೆ ಮತ್ತು ದಿವಸದಿಂದ ದಿವಸಕ್ಕೆ ಆಗುವ ಬದಲಾವಣೆಗಳನ್ನು ಅಧ್ಯಯಿಸಲು; 2 ವಾಯುಮಂಡಲದ ಸಾರ್ವತ್ರಿಕ ಪರಿಚಲನೆಯ ದೊಡ್ಡ ಗಾತ್ರದ ಪರಿಣಾಮಗಳನ್ನು ಅಧ್ಯಯಿಸಲು. ಭೂಮಿಯ ಮೇಲ್ಮೈಯಲ್ಲಿ ಗಾಳಿಯ ಪ್ರತ್ಯಕ್ಷ ಪರಿಣಾಮಗಳನ್ನು ನೆಲಕೊರೆತ, ಸಸ್ಯಲಕ್ಷಣ, ಕಟ್ಟಡಗಳಿಗೆ ಘಾಸಿ, ಜಲತರಂಗಗಳ ಉತ್ಪಾದನೆ ಇವೇ ಮುಂತಾದವುಗಳಲ್ಲಿ ಕಾಣಬಹುದು. ಎತ್ತರಕ್ಕೆ ಸಾಗಿದಂತೆ ವಾಯುವಿಮಾನಗಳ ಚಲನೆ, ಕ್ಷಿಪಣಿಗಳ ಗಮನ, ವಿಕಿರಣಪಟು ಉತ್ಪನ್ನಗಳ ಹರಡುವಿಕೆ, ಕಾರ್ಖಾನೆಗಳ ಅನಿಲೋಚ್ಚಾಟನೆಗಳ ವಿತರಣೆ ಇವುಗಳ ಮೇಲೆಲ್ಲ ಗಾಳಿ ಗಮನಾರ್ಹವಾಗಿ ಪ್ರಭಾವ ಬೀರುತ್ತದೆ. ಮೋಡಗಳ ಸಂಚಾರ, ಮಳೆಸುರಿತ, ಹವೆ ಮುಂತಾದವುಗಳ ಮೇಲೆ ಕೂಡ ಗಾಳಿಯ ಪ್ರಭಾವ ಉಂಟು. ಗಾಳಿಯ ವೇಗವನ್ನು ಅನುಸರಿಸಿ ಅದರಲ್ಲಿ ಪ್ರಭೇದಗಳನ್ನು ಮಾಡಲಾಗಿದೆ. ಇವುಗಳ ವಿವರಣೆಗೆ
(ನೋಡಿ- ಮಾರುತ)
(ನೋಡಿ- ವಾಯು)									*
(ಪರಿಷ್ಕರಣೆ: ಹೆಚ್.ಆರ್.ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ